ಧ್ಯಾನ

Yoga

(ಚಿತ್ರ ಕೃಪೆ: ಅಂತರ್ಜಾಲ)

EmptyLine

ಅನುಭಾವದನುಭವದ ಅಚ್ಚರಿಯು ಅನುರಣಿಸಿ

ಅನುದಿನವೂ ಮನವ ಕಾಡುತಲಿರಲು

ಕಾರ್ಮುಗಿಲ ನಡುವಿಂದ ಕೋಲ್ಮಿಂಚು ಸುಳಿದಂತೆ

ಕಗ್ಗತ್ತಲಾ ನಡುವೆ ಕಿಡಿಯೊಂದು ಇಣುಕಿರಲು

EmptyLine

ಧಾರಿಣಿಯ ಮೈ ಮೇಲೆ ಜಾರಿದಾ ಹನಿಯೊಂದು

ಕಣ್ಣೀರೋ ಪನ್ನೀರೋ ಮಳೆ ನೀರೋ ಅರಿಯದೆ

ಅಸ್ಥಿತ್ವ ಕಳೆದು ಕರಗಿರಲು ಮಡಿಲಿನೊಳು

EmptyLine

ಹೆಜ್ಜೆಯೆಷ್ಟಿಟ್ಟರು ಮತ್ತೆ ಗಾವುದ ಹೆಚ್ಚು

ನಡೆದಷ್ಟೂ ದೂರಕು ಸವೆಯದಿರೆ ದಾರಿ

EmptyLine

ನಿರ್ಭಾವ ನಿರ್ಭೀಡೆಗಳ ನಡುವೆ

ಗೋಳಿಡುವ ಓ ಮನವೇ

ಜಗದ ಗೊಡವೆಗೆ ಹೋಗದಿರು ನೀನು

ನಿನಗೇಕೆ ಇಲ್ಲ ಸಲ್ಲದ ಬೇವಸು

EmptyLine

ಕರಗಿರಲು ಶಬ್ಧಾಂತರಾಳದ ಭಾವಧಾರೆಯೊಳು

ತನುವು ಮುಷ್ಟಿ ಬಿಗಿಯಲಿ ಜಲವ ಹಿಡಿದಿಡುವ ಭರದಿ

ಬಿಟ್ಟು ಬಿಡು ಮನವನ್ನು ಹಾರಿ ಹೋಗಲಿ ದೂರ

ತಾನೇ ಮರಳಲಿ ಹಾಗೆ ಹಕ್ಕಿ ಗೂಡ ಸೇರುವ ತೆರದಿ

EmptyLine

(ಬಹಳ ದಿನಗಳ ನಂತರ ಹಾಗೆ ಸುಮ್ಮನೆ ಧ್ಯಾನದ ಕುರಿತ ಚಿಂತನೆಯಲ್ಲಿ ಉಧ್ಭವಿಸಿದ ಕವನ)

Categories: Uncategorized

ಅಲ್ಲಿ ನೀವಿರಬೇಕು ಮತ್ತು ನಿಮ್ಮ ಶುಭ ಹಾರೈಕೆ ನಮಗಿರಬೇಕು

ನವೆಂಬರ್ ೧೨, ಶುಕ್ರವಾರದಂದು ಶ್ರೀ ಕ್ಷೇತ್ರ ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನನ್ನ ವಿವಾಹ. ದಯಮಾಡಿ ತಾವುಗಳು ಕುಟುಂಬ ಸಮೇತರಾಗಿ ಆಗಮಿಸ ಬೇಕಾಗಿ ತಮ್ಮಲ್ಲಿ ಪ್ರೀತಿಯ ವಿನಂತಿ. ಅಲ್ಲಿ ನೀವಿರಬೇಕು ಮತ್ತು ನಿಮ್ಮ ಶುಭ ಹಾರೈಕೆ ನಮಗಿರಬೇಕು.

ಅಲ್ಲಿ ನೀವಿರಬೇಕು ಮತ್ತು ನಿಮ್ಮ ಶುಭ ಹಾರೈಕೆ ನಮಗಿರಬೇಕು

ಮಾರ್ಗ: ಬೆಂಗಳೂರು –> ಶಿವಮೊಗ್ಗ –> ತೀರ್ಥಹಳ್ಳಿ –> ಸಿದ್ದಾಪುರ (ಕುಂದಾಪುರ) –> ಕಮಲಶಿಲೆ

ಗೂಗಲ್ ನಕ್ಷೆ

ನಂಗೊತ್ತಿತ್ತು ನೀವು ಬರ್ತೀರಿ ಅಂತ… ನಿಮಗೆ ಸ್ವಾಗತ

ಅಕ್ಟೋಬರ್ 14, 2009 28 comments

 

ನಂಗೊತ್ತಿತ್ತು ನೀವು ಬರ್ತೀರಿ ಅಂತ... ನಿಮಗೆ ಸ್ವಾಗತ

ನಂಗೊತ್ತಿತ್ತು ನೀವು ಬರ್ತೀರಿ ಅಂತ... ನಿಮಗೆ ಸ್ವಾಗತ

 

ಸದ್ಯ ಬಂದ್ರಲ್ಲ, ಬನ್ನಿ ಬನ್ನಿ ನಿಮಗೆ ಆದರದ ಸ್ವಾಗತ. ಎಲ್ಲಿ ಬರೋದಿಲ್ವೋ ಅಂತ ಹೆದರಿದ್ದೆ. ಬನ್ನಿ ಕೂತ್ಕೊಳ್ಳಿ. ಬೆಳಿಗ್ಗೆಯಿಂದ ಸಿಕ್ಕಾಪಟ್ಟೆ ಕೆಲಸ, ಹೊಸ ಮನೆಗೆ ಹಳೆ ಮನೆಯಿಂದ ಎಲ್ಲವನ್ನು ತಂದು, ಜೋಡಿಸಿ, ಮತ್ತೆ ನೀವು ಬರುವಷ್ಟರಲ್ಲಿ ಎಲ್ಲವನ್ನು ಒಪ್ಪವಾಗಿ ಜೋಡಿಸ ಬೇಕಿತ್ತಲ್ವ, ಗೋಡೆಗಳಿಗೆ ಯಾವ ಬಣ್ಣ ಚೆನ್ನಾಗಿ ಕಾಣುತ್ತೆ, ಯಾವ ಅಕ್ಷರ ವಿನ್ಯಾಸ ಮತ್ತು ಅದರ ಬಣ್ಣ ನಿಮ್ಮ ಕಣ್ಣುಗಳಿಗೆ ಹಿತವಾಗಿರುತ್ತೆ ಅಂತೆಲ್ಲ ಯೋಚಿಸಿ, ಅಲಂಕರಿಸೋದೆ ಆಯ್ತು ಇವತ್ತು. ಬರೆಯೋದು ನಾಲ್ಕಾಣೆ, ಹೇಳೋದು ಹದಿನಾರಾಣೆದು ಅಂತೀರಾ. ಏನ್ಮಾಡೋದು ಹೇಳಿ ನಾನು ಬರೆಯೋಕೆ ಕುಳಿತಾಗಲೇ ಮನಸ್ಸು ಹಠಕ್ಕೆ ಬಿದ್ದ ಮಗುವಿನಂತೆ ಹಾಳೆಯ ಎದುರು ಧರಣಿ ಕುಳಿತು ಬಿಡುತ್ತೆ, ನಾನಾದರು ಏನ್ಮಾಡ್ಲಿ. ಇನ್ಮುಂದಾದ್ರು ಹಾಗೆಲ್ಲ ಆಗಬಾರದು ಅಂತ ಅಂದ್ಕೊಂಡಿದೀನಿ. ಏನೋ ನೀವೆಲ್ಲ ಇದೀರಲ್ಲ ಅದೇ ಧೈರ್ಯ. ನೋಡೇ ಬಿಡೋಣ ಹೊಸ ಮನೆಯ ವಾಸ್ತು ಹೇಗಿದೆ ಅಂತ, ಇನ್ನು ಎಲ್ಲಿಯವರೆಗೆ ಇಲ್ಲಿ ವಾಸ ಅನ್ನೋದು ಗೊತ್ತಿಲ್ಲ. ಹೊಸ ಮನೆಯ ಅಂಗಳದಲ್ಲಿ ಸಾಧ್ಯವಾದಷ್ಟು ದಿನ ಲಗೋರಿ ಆಡಲೇ ಬೇಕು ಅಂತ ಬಂದು ಕುಳಿತಿದೀನಿ. ನೋಡೇ ಬಿಡೋಣ ಏನಾಗುತ್ತೆ ಅಂತ. ನನ್ನ ಹೊಸ ಮನೆಗೆ ಬಂದಿದೀರಿ, ನಿಮಗೆ ಹೇಗನ್ನಿಸ್ತು ಮನೆ ಅಂತ ಹೇಳ್ತೀರಲ್ಲ. ಹೊರಡೋಕೆ ಮುನ್ನ ಒಂದು ಮಾತು ದಯವಿಟ್ಟು ಆಗಾಗ ತಪ್ಪದೆ ಬರ್ತಾ ಇರಿ, ಬರ್ತೀರಿ ಅಲ್ವ.

ಭಯ

ಅಕ್ಟೋಬರ್ 6, 2009 15 comments

ಕನಸೇ ಕದಲದ ಕಾರಿರುಳ ರಾತ್ರಿಯೊಳು
ನೆನಪ ಅಗೆದಗೆದು ತೆಗೆವ ಹುಚ್ಚನಿವ ಅಕ್ಷರಾರ್ಥಃ
ಇವನೆದೆಗೆ ಏನು ಒಗ್ಗುವುದಿಲ್ಲ, ಇವನ ನಿಂದನೆಗೆ
ಸಕಲವೂ ಎದೆ ಸುಡುವ ಜ್ವಲನ ಪದಾರ್ಥ

 ಯಶದ ಹಾದಿಯ ಸರಣಿಯಾರಂಭಕು ಮುನ್ನ
ನಿರ್ಲಿಪ್ತ ಮೋರೆ ಹೊತ್ತು ಗುರಿಯ ದಿಟ್ಟಿಸುವನು
ದುಡಿದು ದಣಿಯುವ ಮುನ್ನ ವಿಶ್ರಾಂತಿ ಬೇಕಂತೆ
ಗಾವುದವು ಹೆಜ್ಜೆ ಊರದ ಎಗ್ಗ ಗಾವಿಲನು

 ಬದುಕ ಶಪಿಸುತ್ತಾನೆ, ಒಳಗೆ ಕೊರಗುತ್ತಾನೆ
ಕುಸಿದು ಮರುಗುತ್ತಾನೆ ಮೂಢನಿವನು
ಸೂರ್ಯ ರಶ್ಮಿಯ ಕಾಂತಿ ಕಂಡೊಡನೆ ಮತಿ ಭ್ರಾಂತಿ
ಅಕ್ಷಿ ಪಟಲವ ಮುಚ್ಚಿ ಜಗ ಕತ್ತಲೆನ್ನುವವನಿವನು

ಒಳಗೆ ಕುಳಿತಿಹನಂತೆ, ಕಂಡು ಕಾಣದ ಹಾಗೆ
ಕಿಡಿಯ ಸೋಕಿಸಿ ಹೊತ್ತಿಸುತ ಎದೆಯ ಬೇಗೆ

ಮುಟ್ಟಿ ನೋಡಿರಿ ಒಮ್ಮೆ ಮಗ್ಗುಲು ಬದಲಿಸುವನು
ಇವನದೀಗ ನಿಮ್ಮೆದಯ ಅಂಗಳದಿ ಪಾರ್ಶ್ವ ಶಯನ
ಇವನಿಂದ ಅಡ್ಡಿ ನೂರೆಂಟು ಆತಂಕ ಇದಿರುಂಟು
ತಡೆದು ನಿಲ್ಲಿಸುವ ನಿಮ್ಮ ಹಿಡಿಯಲಾರದ ಹಾಗೆ ಗುರಿಯ ಅಯನ

ಬಲು ಚಿಕ್ಕ ಬದುಕಿಹುದು ಅಕ್ಕರೆಯು ಇರಲೆದೆಗೆ
ನಡೆವ ಹಾದಿಯ ಗುರಿಯು ಅಪರಿಮಿತವು
ಹೆಡೆಮುರಿಯ ಕಟ್ಟಿ ತಳ್ಳಿ ಬಿಡಿ ಇವನನ್ನು
ಶಾಶ್ವತವಾಗಿ ಏರಿ ಬಿಡಲಿವನು ಮರಣ ಶಯನ

ನನ್ನ ಬ್ಲಾಗಿನಲ್ಲಿ ಮೊದಲ ಕವನ ಪ್ರಕಟಿಸಿ ಒಂದು ವರ್ಷ ಸಂದಿದೆ, ಬರೆದಿದ್ದು ಬೆರಳೆಣಿಕೆಯಷ್ಟು ಮಾತ್ರ, ಅದರಲ್ಲಿ ಜೊಳ್ಳೇ ಹೆಚ್ಚು ಎಂಬುದು ನನ್ನ ಮನದ ಅಂಬೋಣ. ಆದರು ಒಂದು ವರ್ಷದ ಅವಧಿಯಲ್ಲಿ ಬ್ಲಾಗು ನನಗೆ ಅನೇಕ ಆತ್ಮೀಯ ಗೆಳೆಯ, ಗೆಳತಿಯರನ್ನು, ಅಕ್ಕರೆಯ ಅಕ್ಕಂದಿರನ್ನು ಮತ್ತು ನಲ್ಮೆಯ ಅಣ್ಣಂದಿರನ್ನು ನೀಡಿದೆ, ಪ್ರತಿ ಬರಹ ಪ್ರಕಟಿಸಿದಾಗ ಜೊತೆ ನಿಂತು ತಿದ್ದಿ, ಪ್ರೋತ್ಸಾಹಿಸಿದ ನಿಮಗೆಲ್ಲ ನಾನು ಆಭಾರಿ. ನಿಮ್ಮ ಪ್ರೀತಿ ನನ್ನ ಜೊತೆ ಹೀಗೆ ಇರಲಿ ಎಂದು ಆಶಿಸುತ್ತೇನೆ.”

ನೀನಿಲ್ಲ ಅನ್ನೋ ಕೊರತೆ ನನ್ನನ್ನು ತುಂಬಾನೆ ಕಾಡುತ್ತೆ…

ಅಂತರಾಳ – ೭

ನಿಂಗೊತ್ತಾ ???!!!

ನಾನು ತೀರ ಚಿಕ್ಕವನಿದ್ದಾಗ ಪ್ರಾಥಮಿಕ ಶಾಲಾ ಶಿಕ್ಷಕಿಯಾದ ಅಮ್ಮ ಶನಿವಾರದ ಬೆಳಗಿನ ಶಾಲೆಗೆ ತಡವಾಗುತ್ತೆ ಅಂತ ಓಡೋಡಿ ಹೋದ ಮೇಲೆ ನಾನು ಸ್ನಾನದ ಮನೆಯಲ್ಲಿ ಬಿಸಿ ನೀರು ಬೆರೆಸಿಕೊಳ್ಳಲು ಬರದೆ ಬರಿ ತಣ್ಣೀರು ಸುರಿದು ಕೊಂಡು ಸ್ನಾನ ಮುಗಿಸಿದಾಗೆಲ್ಲ ನೀನು ವಿಪರೀತ ಬೇಕು ಅಂತ ಅನ್ನಿಸಿಬಿಡುತ್ತಿದ್ದೆ. ನೀನಿಲ್ಲ ಅನ್ನೋ ಕೊರಗು ಮತ್ತು ಕೊರತೆ ನನ್ನನ್ನು ಕಾಡುತ್ತಿದ್ದಿದ್ದೆ ಅಂತಹ ಕ್ಷಣಗಳಲ್ಲಿ.

ಅಮ್ಮ ಜ್ವರದಿಂದ ಹಾಸಿಗೆ ಹಿಡಿದ ದಿನಗಳಲ್ಲಿ ಅಕ್ಕಿ ಅಥವಾ ಗೋಧಿ ರವೆಯನ್ನೋ ಹುರಿದು, ಕುದಿವ ನೀರಿನಲ್ಲಿ ಹಾಕಿ, ಚೆನ್ನಾಗಿ ಬೇಯಿಸಿ ಗಂಜಿ ಮಾಡಿ ಇಳಿಸುವ ಹೊತ್ತಲ್ಲಿ ಪಾತ್ರೆಯಂಚು ಕೈ ತಾಕಿ ಸುಟ್ಟಾಗ ನೀನಿದ್ದಿದ್ರೆ ಹೀಗೆಲ್ಲ ಆಗ್ತಿರಲಿಲ್ಲ ಅಲ್ವ ಅಂತ ಕಣ್ಣೀರು ತುಂಬಿ ಕೊಳ್ಳುತ್ತಿದ್ದೆ. ಮಳೆಗಾಲದಲ್ಲಿ ಪಾಚಿಯ ಮೇಲೆ ಕಾಲಿಟ್ಟು ಕೆಸರಲ್ಲಿ ಜಾರಿ ಬಿದ್ದು ಮನೆಗೆ ಬಂದಾಗ, ಪರೀಕ್ಷೆ ಹಿಂದಿನ ದಿನ ನಿದ್ದೆ ಬಾರದಿದ್ದಾಗ, ನಡು ಮಧ್ಯ ರಾತ್ರಿ ಬೀದಿ ನಾಯಿ ವಿಕಾರವಾಗಿ ಊಳಿಟ್ಟಾಗ, ಏನೋ ತಪ್ಪು ಮಾಡಿದಾಗ ಅಮ್ಮ ಗದರಿದಾಗ ನೀನಿಲ್ಲ ಅನ್ನೋದು ತುಂಬಾ ನೋವು ನೀಡುತ್ತಿತ್ತು.

ಎರಡನೇ ತರಗತಿಯಲ್ಲಿದ್ದಾಗ ಇದ್ದಕ್ಕಿದ್ದಂತೆ ಬಿಡದೆ ಧೋ ಎಂದು ಸುರಿದ ಮಳೆಯಿಂದ ಮನೆಗೆ ಬರಲಾಗದೆ ಶಾಲೆಯ ಮೆಟ್ಟಿಲ ಮೇಲೆ ಗೆಳೆಯನ ಜೊತೆ ಕುಳಿತಿದ್ದಾಗ ಛತ್ರಿ ಹಿಡಿದು ಬಂದ ಅವನಕ್ಕ ಅವನ ತಲೆ ಒರೆಸಿ ಛತ್ರಿ ಒಳಗೆ ಸೇರಿಸಿ ಕೊಂಡಾಗ, “ ಮಳೆ ನನಗೇನು ಅಲ್ಲ, ಮಳೆಯಂದ್ರೆ ಮತ್ತು ಮಳೆಯಲ್ಲಿ ನೆನೆಯೋದಂದ್ರೆ ನನಗೆ ತುಂಬಾನೆ ಇಷ್ಟ” ಅಂತ ಸುಳ್ಳೇ ನಕ್ಕು ಸಮವಸ್ತ್ರದ ಅಂಗಿಯೊಳಗೆ ಶಾಲೆ ಚೀಲ ಸೇರಿಸಿ ಕಣ್ಣೀರಾಗಿ ಮಳೆಯಲ್ಲಿ ಓಡಿದ ದಿನ. ಮನೆ ತಲುಪಿದ ಮೇಲೆಮಳೆಯಲ್ಲಿ ನೆಂದು ಬಂದಿದೀಯಲ್ಲ, ಸ್ವಲ್ಪ ಹೊತ್ತು ಕಾದಿದ್ದು ಬರಬಹುದಿತ್ತಲ್ಲ ಎಂದು ಅಮ್ಮ ರೇಗಿದಾಗ, ನನ್ನ ಪಾಲಿಗೆ ನೀನು ಯಾಕಿಲ್ಲ ಅಂತ ದೇವರಲ್ಲಿ ಜಗಳಕ್ಕೆ ನಿಲ್ಲ ಬೇಕು ಅಂತ ಅನ್ನಿಸಿ ಬಿಡುತ್ತಿತ್ತು. ನೀನಿದ್ದಿದ್ದರೆ ನಾನು ಮಳೆಯಲ್ಲಿ ನೆನೆಯುತ್ತಿರಲಿಲ್ಲ ಅಂತೇನು ಇಲ್ಲ, ಆದರೆ ನೆನೆದು ಮುದ್ದೆಯಾಗಿ ಬಂದಾಗ ಕನಿಷ್ಠ ತಲೆ ಒರೆಸಿ ಕೊಡಲಿಕ್ಕಾದರು ನೀನು ಇರುತ್ತಿದ್ದಿದ್ದರೆ ಅನ್ನೋ ತುಡಿತ ನನಗಿತ್ತು.

ಮೊನ್ನೆ ಹೀಗೆ ಈ ಯಾಂತ್ರಿಕ ನಗರಿಯ ಮಳೆಗೆ ಸಿಕ್ಕಿ ಒದ್ದೆಯಾಗಿ ಮನೆ ಸೇರಿದಾಗ ಫೋನಾಯಿಸಿದ ಅಮ್ಮ ಮದುವೆ ಬಗ್ಗೆ ಏನು ತೀರ್ಮಾನಿಸಿದೆ ಎಂದಾಗ, ಕೊನೆ ಪಕ್ಷ ನನ್ನ ತಮ್ಮ ಚಿಕ್ಕವನು, ಇಷ್ಟು ಬೇಗ ಮದುವೆ ಬೇಡ ಅಂತ ಅಮ್ಮನಿಗೆ ಒಪ್ಪಿಸಲಿಕ್ಕಾದರು ಅಥವಾ ಅಮ್ಮ ನೋಡುವ ಹುಡುಗಿ ನನ್ನ ತಮ್ಮನಿಗೆ ಸೂಕ್ತಳೋ ಇಲ್ಲವೊ ಅಂತ ನಿರ್ಧರಿಸಲು ನೀನಿರಬೇಕಿತ್ತು.

ಕೊನೆ ಪಕ್ಷ ಎದೆಯ ದುಗುಡ ತೀರ ಹೆಚ್ಚಾದಾಗ ಮುಖ ಮುಚ್ಚಿಕೊಂಡು ಮಲಗಿ ಬಿಡಲು ನಿನ್ನ ಮಡಿಲು ಬೇಕಿತ್ತು, ಅಲ್ಲಿ ತಲೆ ನೇವರಿಸಿ ಸಮಾಧಾನಿಸಲು ನನಗೂ ಒಬ್ಬಳು ಅಕ್ಕ ಇರಬೇಕಿತ್ತು.

Categories: ದುಃಖ, ನೋವು