
ನಂಗೊತ್ತಿತ್ತು ನೀವು ಬರ್ತೀರಿ ಅಂತ... ನಿಮಗೆ ಸ್ವಾಗತ
ಸದ್ಯ ಬಂದ್ರಲ್ಲ, ಬನ್ನಿ ಬನ್ನಿ ನಿಮಗೆ ಆದರದ ಸ್ವಾಗತ. ಎಲ್ಲಿ ಬರೋದಿಲ್ವೋ ಅಂತ ಹೆದರಿದ್ದೆ. ಬನ್ನಿ ಕೂತ್ಕೊಳ್ಳಿ. ಬೆಳಿಗ್ಗೆಯಿಂದ ಸಿಕ್ಕಾಪಟ್ಟೆ ಕೆಲಸ, ಹೊಸ ಮನೆಗೆ ಹಳೆ ಮನೆಯಿಂದ ಎಲ್ಲವನ್ನು ತಂದು, ಜೋಡಿಸಿ, ಮತ್ತೆ ನೀವು ಬರುವಷ್ಟರಲ್ಲಿ ಎಲ್ಲವನ್ನು ಒಪ್ಪವಾಗಿ ಜೋಡಿಸ ಬೇಕಿತ್ತಲ್ವ, ಗೋಡೆಗಳಿಗೆ ಯಾವ ಬಣ್ಣ ಚೆನ್ನಾಗಿ ಕಾಣುತ್ತೆ, ಯಾವ ಅಕ್ಷರ ವಿನ್ಯಾಸ ಮತ್ತು ಅದರ ಬಣ್ಣ ನಿಮ್ಮ ಕಣ್ಣುಗಳಿಗೆ ಹಿತವಾಗಿರುತ್ತೆ ಅಂತೆಲ್ಲ ಯೋಚಿಸಿ, ಅಲಂಕರಿಸೋದೆ ಆಯ್ತು ಇವತ್ತು. ಬರೆಯೋದು ನಾಲ್ಕಾಣೆ, ಹೇಳೋದು ಹದಿನಾರಾಣೆದು ಅಂತೀರಾ. ಏನ್ಮಾಡೋದು ಹೇಳಿ ನಾನು ಬರೆಯೋಕೆ ಕುಳಿತಾಗಲೇ ಮನಸ್ಸು ಹಠಕ್ಕೆ ಬಿದ್ದ ಮಗುವಿನಂತೆ ಹಾಳೆಯ ಎದುರು ಧರಣಿ ಕುಳಿತು ಬಿಡುತ್ತೆ, ನಾನಾದರು ಏನ್ಮಾಡ್ಲಿ. ಇನ್ಮುಂದಾದ್ರು ಹಾಗೆಲ್ಲ ಆಗಬಾರದು ಅಂತ ಅಂದ್ಕೊಂಡಿದೀನಿ. ಏನೋ ನೀವೆಲ್ಲ ಇದೀರಲ್ಲ ಅದೇ ಧೈರ್ಯ. ನೋಡೇ ಬಿಡೋಣ ಹೊಸ ಮನೆಯ ವಾಸ್ತು ಹೇಗಿದೆ ಅಂತ, ಇನ್ನು ಎಲ್ಲಿಯವರೆಗೆ ಇಲ್ಲಿ ವಾಸ ಅನ್ನೋದು ಗೊತ್ತಿಲ್ಲ. ಹೊಸ ಮನೆಯ ಅಂಗಳದಲ್ಲಿ ಸಾಧ್ಯವಾದಷ್ಟು ದಿನ ಲಗೋರಿ ಆಡಲೇ ಬೇಕು ಅಂತ ಬಂದು ಕುಳಿತಿದೀನಿ. ನೋಡೇ ಬಿಡೋಣ ಏನಾಗುತ್ತೆ ಅಂತ. ನನ್ನ ಹೊಸ ಮನೆಗೆ ಬಂದಿದೀರಿ, ನಿಮಗೆ ಹೇಗನ್ನಿಸ್ತು ಈ ಮನೆ ಅಂತ ಹೇಳ್ತೀರಲ್ಲ. ಹೊರಡೋಕೆ ಮುನ್ನ ಒಂದು ಮಾತು ದಯವಿಟ್ಟು ಆಗಾಗ ತಪ್ಪದೆ ಬರ್ತಾ ಇರಿ, ಬರ್ತೀರಿ ಅಲ್ವ.

ಕನಸೇ ಕದಲದ ಕಾರಿರುಳ ರಾತ್ರಿಯೊಳು
ನೆನಪ ಅಗೆದಗೆದು ತೆಗೆವ ಹುಚ್ಚನಿವ ಅಕ್ಷರಾರ್ಥಃ
ಇವನೆದೆಗೆ ಏನು ಒಗ್ಗುವುದಿಲ್ಲ, ಇವನ ನಿಂದನೆಗೆ
ಸಕಲವೂ ಎದೆ ಸುಡುವ ಜ್ವಲನ ಪದಾರ್ಥ
ಯಶದ ಹಾದಿಯ ಸರಣಿಯಾರಂಭಕು ಮುನ್ನ
ನಿರ್ಲಿಪ್ತ ಮೋರೆ ಹೊತ್ತು ಗುರಿಯ ದಿಟ್ಟಿಸುವನು
ದುಡಿದು ದಣಿಯುವ ಮುನ್ನ ವಿಶ್ರಾಂತಿ ಬೇಕಂತೆ
ಗಾವುದವು ಹೆಜ್ಜೆ ಊರದ ಎಗ್ಗ ಗಾವಿಲನು
ಬದುಕ ಶಪಿಸುತ್ತಾನೆ, ಒಳಗೆ ಕೊರಗುತ್ತಾನೆ
ಕುಸಿದು ಮರುಗುತ್ತಾನೆ ಮೂಢನಿವನು
ಸೂರ್ಯ ರಶ್ಮಿಯ ಕಾಂತಿ ಕಂಡೊಡನೆ ಮತಿ ಭ್ರಾಂತಿ
ಅಕ್ಷಿ ಪಟಲವ ಮುಚ್ಚಿ ಜಗ ಕತ್ತಲೆನ್ನುವವನಿವನು
ಒಳಗೆ ಕುಳಿತಿಹನಂತೆ, ಕಂಡು ಕಾಣದ ಹಾಗೆ
ಕಿಡಿಯ ಸೋಕಿಸಿ ಹೊತ್ತಿಸುತ ಎದೆಯ ಬೇಗೆ
ಮುಟ್ಟಿ ನೋಡಿರಿ ಒಮ್ಮೆ ಮಗ್ಗುಲು ಬದಲಿಸುವನು
ಇವನದೀಗ ನಿಮ್ಮೆದಯ ಅಂಗಳದಿ ಪಾರ್ಶ್ವ ಶಯನ
ಇವನಿಂದ ಅಡ್ಡಿ ನೂರೆಂಟು ಆತಂಕ ಇದಿರುಂಟು
ತಡೆದು ನಿಲ್ಲಿಸುವ ನಿಮ್ಮ ಹಿಡಿಯಲಾರದ ಹಾಗೆ ಗುರಿಯ ಅಯನ
ಬಲು ಚಿಕ್ಕ ಬದುಕಿಹುದು ಅಕ್ಕರೆಯು ಇರಲೆದೆಗೆ
ನಡೆವ ಹಾದಿಯ ಗುರಿಯು ಅಪರಿಮಿತವು
ಹೆಡೆಮುರಿಯ ಕಟ್ಟಿ ತಳ್ಳಿ ಬಿಡಿ ಇವನನ್ನು
ಶಾಶ್ವತವಾಗಿ ಏರಿ ಬಿಡಲಿವನು ಮರಣ ಶಯನ
“ನನ್ನ ಈ ಬ್ಲಾಗಿನಲ್ಲಿ ಮೊದಲ ಕವನ ಪ್ರಕಟಿಸಿ ಒಂದು ವರ್ಷ ಸಂದಿದೆ, ಬರೆದಿದ್ದು ಬೆರಳೆಣಿಕೆಯಷ್ಟು ಮಾತ್ರ, ಅದರಲ್ಲಿ ಜೊಳ್ಳೇ ಹೆಚ್ಚು ಎಂಬುದು ನನ್ನ ಮನದ ಅಂಬೋಣ. ಆದರು ಈ ಒಂದು ವರ್ಷದ ಅವಧಿಯಲ್ಲಿ ಈ ಬ್ಲಾಗು ನನಗೆ ಅನೇಕ ಆತ್ಮೀಯ ಗೆಳೆಯ, ಗೆಳತಿಯರನ್ನು, ಅಕ್ಕರೆಯ ಅಕ್ಕಂದಿರನ್ನು ಮತ್ತು ನಲ್ಮೆಯ ಅಣ್ಣಂದಿರನ್ನು ನೀಡಿದೆ, ಪ್ರತಿ ಬರಹ ಪ್ರಕಟಿಸಿದಾಗ ಜೊತೆ ನಿಂತು ತಿದ್ದಿ, ಪ್ರೋತ್ಸಾಹಿಸಿದ ನಿಮಗೆಲ್ಲ ನಾನು ಆಭಾರಿ. ನಿಮ್ಮ ಪ್ರೀತಿ ನನ್ನ ಜೊತೆ ಹೀಗೆ ಇರಲಿ ಎಂದು ಆಶಿಸುತ್ತೇನೆ.”
ನೀವು ಹೇಳಿದ್ದು